ಮಹೋಪಮೆ :-
ಇದು ಕನ್ನಡಕ್ಕೆ ಪಶ್ಚಿಮದಿಂದ ಬಂದ ಕೊಡುಗೆಗಳಲ್ಲೊಂದು. ಹಿಂದೆ ಉಪಮೆಯಿದ್ದಿತೇ ಹೊರತು ಮಹೋಪಮೆ ಇರಲಿಲ್ಲ (ಮಹೋಪಮೆಯ ಛಾಯೆಯನ್ನು ಕೆಲವೆಡೆ ಗುರುತಿಸಬಹುದಷ್ಟೆ). ಎಪಿಕ್ ಸಿಮಿಲಿ ಅಥವಾ ಹೋಮರಿಕ್ ಸಿಮಿಲಿ ಎಂಬುದಕ್ಕೆ ಕನ್ನಡದಲ್ಲಿ 'ಮಹೋಪಮೆ ಎಂದು ನಾಮಕರಣಮಾಡಿ. ಮೊದಲ ಬಾರಿಗೆ ಅದನ್ನು ಬಳಸಿದವರು ಕುವೆಂಪು. ಅದರ ಗುಣ ಲಕ್ಷಣಗಳನ್ನು ಪ್ರಥಮತಃ ವಿವರಿಸಿದರೂ ಅವರೆ. ಅವರ ಚಿತ್ರಾಂಗದಾ ಖಂಡ ಕಾವ್ಯದಲ್ಲಿ ಮತ್ತು ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಹಲವಾರು ಮಹೋಪಮೆಗಳನ್ನು ಕಾಣಬಹುದು.

ಪಾಶ್ಚಾತ್ಯ ಸಾಹಿತ್ಯದಲ್ಲಿ ಮಹೋಪಮೆ ಮೊದಲು ಗೋಚರಿಸುವುದು ಗ್ರೀಕ್ ಮಹಾಕವಿ ಹೋಮರನ ಕಾವ್ಯಗಳಲ್ಲಿ. ಆದ್ದರಿಂದಲೇ ಅದನ್ನು ಹೋಮರುಪಮೆ ಎಂದೂ ಕರೆಯುತ್ತಾರೆ. ಈಚೆಗೆ ಡಾಂಟೆ, ಮಿಲ್ಟನ್, ಮ್ಯಾಥ್ಯೂ ಅರ್ನಾಲ್ಟ್, ಟೆನಿಸನ್, ಮುಂತಾದ ಕವಿಗಳೂ ಅದನ್ನು ಬಳಸಿದ್ದಾರೆ. ಮಹೋಪಮೆ ಸಂಪೂರ್ಣವಾಗಿ ಒಪ್ಪುವುದು ಮಹಾಕಾವ್ಯಗಳಿಗೆ. ಖಂಡಕಾವ್ಯಗಳಲ್ಲಿಯೂ ಅದನ್ನು ಸಾರ್ಥಕವಾಗಿ ಬಳಸಬಹುದು. ಅದರೆ ಭಾವಗೀತೆಯಲ್ಲಿ ಮಹೋಪಮೆ ಶೋಭಿಸಲಾರದು.
ಉಪಮೆಗೂ ಮಹೋಪಮೆಗೂ ಇರುವ ವ್ಯತ್ಯಾಸವೆಂದರೆ, ಮಹೋಪಮೆಯ ದೀರ್ಘತ್ವ ಕುವೆಂಪು ಅವರು ಹೇಳುವಂತೆ, ವಿಸ್ತಾರಗೊಂಡರೆ, ವಿವರ ವರ್ಣನೆಯಿಂದ ದೀರ್ಘವಾದರೆ ಉಪಮೆ ಮಹೋಪಮೆಯಾಗುತ್ತದೆ. ಉಪಮೆ ಮಹೋಪಮೆ ಎರಡರಲ್ಲೂ ಉಪಮೇಯ ಒಂದೇ ಬಗೆಯದಾಗಿರುತ್ತದೆ. ಆದರೆ ಮಹೋಪಮಾ ಪ್ರಕ್ರಿಯೆಯಲ್ಲಿ ಉಪಮಾನ ವಿಶಿಷ್ಟವಾಗಿರುತ್ತದೆ. ಅದು ಒಂದು ಪ್ರತ್ಯೇಕ ಚಿತ್ರವಾಗಿ, ವರ್ಣನೆಯಾಗಿ ಸ್ವತಂತ್ರ ಅಸ್ತಿತ್ವವನ್ನು ಪಡೆದುಕೊಳ್ಳಬಲ್ಲುದು. ಆದ್ದರಿಂದ ಮಹೋಪಮೆ ಉದ್ದಿಷ್ಟ ವಿಷಯದ ಸ್ಪಷ್ಟೀಕರಣ ಮತ್ತು ಪುಷ್ಟೀಕರಣಕ್ಕೆ ನೆರವಾಗುವುದು ಮಾತ್ರವಲ್ಲದೆ, ತನಗೆ ತಾನೆ ಅಸ್ವಾದ್ಯವಾಗಿಯೂ ಪರಿಣಮಿಸುತ್ತದೆ.
ದೀರ್ಘತೆ ಅಥವಾ ಬೃಹತ್ತು, ಭಾವಕೋಶ ಸಂಪತ್ತು, ರಸಪುಷ್ಟಿ, ನೂತನ ಸಂಸ್ಕಾರಸೃಷ್ಟಿ, ಮಹತ್ತು-ಇವು ಮಹೋಪಮೆಯ ಲಕ್ಷಣಗಳೆಂದು ಹೇಳಲಾಗಿದೆ.
ಮಹೋಪಮೆಗೆ ಒಂದು ಸಣ್ಣ ಉದಾಹರಣೆ:
ದೀವದ ಹೋರಿಯಂ ಕಟ್ಟಿ ಬೇಂಟೆಗಂ
ಮರಸು ಕುಳಿತಿರೆ ಮರದ ತುದಿ ಮಂಚಿಗೆಯ ಮೇಲೆ,
ಸೋವತವನರಸಿ ಬರ್ಪುದು ಪಸಿದ ಪುಲಿ ಮುಂದೆ
ಕೂರ್ವಿದೆರೆಯಂ ಕಂಡದಂ ಕೊಳ್ವಲಂಪಿಂದೆ
ಹೊಂಚಿ ಮುಂಬರಿಯುತಿರಲೀಡೇಳುವುದು ಕೋವಿ.
ನೆರಕೆ ತಗುಲಿದ ಗುಂಡಿನೇರಿಂಗೊಡನೆ ಜೀವಿ
ಮೈ ಮರೆದುರುಳೆ. ಮರಸಿನಿಂದಿಳಿದು ಬಂದು, ಆ
ಬೇಂಟೆಗಾರಂ ತನ್ನ ಬೇಂಟೆಯನೊಸೆದು ನೋಡಿ
ಮೆಚ್ಚುವನ್, ತನ್ನ ಬೀರರ ಬೆನ್ಗೆ ತಾನೆ ಕೈ
ಚಪ್ಪರಿಸಿ ! ಓಡಿದರೊ ಬಿಳ್ದಿಂದ್ರಜನ ಬಳಿಗೆ
ರಾಮಾದಿಗಳುಮಂತೆ. 	(ಶ್ರೀರಾಮಾಯಣ ದರ್ಶನಂ)
ಅನೇಕ ಪುಟಗಳಷ್ಟು ವ್ಯಾಪ್ತಿಯದಾಗಬಲ್ಲುದು ಮಹೋಪಮೆ. ಅಂಥ ಸಂದರ್ಭಗಳಲ್ಲಿ ಅದಕ್ಕೆ 'ಸ್ವಸಂಪೂರ್ಣವಾದ, ವರ್ಣನಾತ್ಮಕವಾದ ಭಾವಗೀತೆಯ ಬೆಲೆ ಬರುತ್ತದೆ. 	 
(ಸಿ.ಪಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ